ಚೆಳ್ಳೆಹಣ್ಣು
ಬೊರ್ಯಾಜಿನೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡು ಮರ. ವೈಜ್ಞಾನಿಕ ಹೆಸರು ಕಾರ್ಡಿಯ ಮಿಕ್ಸ ಅಥವಾ ಡೈಕಾಟೊಮ. ಇದು ಭಾರತದ ಮೂಲ ನಿವಾಸಿ. ಶ್ರೀ ಲಂಕಾದಲ್ಲೂ ಇದರ ವ್ಯಾಪ್ತಿಯಿದೆ. ಇದು 6-12 ಎಂ. ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಮುಖ್ಯಕಾಂಡದ ದಪ್ಪ ಸುಮಾರು 1-1.3 ಎಂ. ಎಲೆಗಳು ಚರ್ಮಿಲ, ಬಣ್ಣ ದಟ್ಟ ಹಸಿರು. ಫಲಗಳು 12-25 ಸೆಂ.ಮೀ. ಗಾತ್ರದವು. ಮಾಗಿದಾಗ ಕಂದುಮಿಶ್ರಿತ ಹಳದಿಬಣ್ಣವನ್ನು ತಳೆಯುತ್ತವೆ. ಹಣ್ಣಿನೊಳಗೆ ಲೋಳೆಯಂಥ ತಿರುಳೂ ಒಂದು ಬೀಜವೂ ಇವೆ. ತಿರುಳಿಗೆ ಸಿಹಿ ರುಚಿಯಿದೆ. ಇದನ್ನು ತಿನ್ನಬಹುದು. ಇದಕ್ಕೆ ಜಂತುನಾಶಕ, ಮೂತ್ರಸ್ರಾವ ಉತ್ತೇಜಕ, ಶಾಮಕ ಹಾಗೂ ಕಫಹಾರಕ ಗುಣಳಿವೆಯಾಗಿ ಇದನ್ನು ಶ್ವಾಸಕೋಶ ಹಾಗೂ ಮೂತ್ರಪಿಂಡದ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬೀಜವನ್ನು ಗಜಕರ್ಣ ವ್ಯಾಧಿಗೂ ತೊಗಟೆಯ ರಸವನ್ನು ಅಜೀರ್ಣ ಹಾಗೂ ಜ್ವರಗಳಲ್ಲೂ ಉಪಯೋಗಿಸುತ್ತಾರೆ. ತಿರುಳನ್ನು ಗೋಂದಾಗಿ ಬಳಸುವುದುಂಟು. ಚೌಬೀನೆಯಿಂದ ದೋಣಿ, ಹಲಗೆ, ಕೃಷಿ ಉಪಕರಣಗಳು, ಬಂದೂಕಿನ ಹಿಡಿ ಮುಂತಾದವನ್ನು ತಯಾರಿಸುವುದಿದೆ. ದೋರಗಾಯಿಗಳಿಂದ ಉಪ್ಪಿನಕಾಯಿ ಮಾಡುವುದುಂಟು.
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ